Sunday, April 20, 2014

Bamberg

Bamberg ಜರ್ಮನಿಯ ಬವೇರಿಯಾ ರಾಜ್ಯದ ಉತ್ತರ ಭಾಗದಲ್ಲಿದೆ. ನಗರದ ಹಳೆಯ ಭಾಗವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ನಗರದ ಹತ್ತಿರದಲ್ಲೆ ರೆಗ್ನಿತ್ಜ್ ನದಿ ಮಯಿನ್ ನದಿಗೆ ಸೇರುತ್ತದೆ . 
ನಾವು Bamberg ಗೆ ಹೋದದ್ದು ಏಪ್ರಿಲ್ ಕೊನೆಗೆ. ಇನ್ನೂ ಚಳಿ ಬಿಟ್ಟಿರಲ್ಲಿಲ್ಲ. ನಾವಿರುವ ನ್ಯೂರೆಂಬರ್ಗ್ ನಿಂದ ಬರಿ ೬೩ ಕಿಲೋಮೀಟರು. ರೈಲ್ ಸಂಪರ್ಕ ಚೆನ್ನಾಗಿದೆ. ನಾವು ಹೋದದ್ದು ಭಾನುವಾರವಾದ್ದರಿಂದ ರಸ್ತೆಯಲ್ಲಿ ಜನರೇ ಕಾಣಲಿಲ್ಲ . ಸುಮಾರು ಹತ್ತು ಗಂಟೆಯ ಮೇಲೆ ಪ್ರವಾಸಿಗರು ಬರತೊಡಗಿದರು. 
ಖಾಲಿಯಾಗಿ ಕಾಣುತ್ತಿರುವ ಪೇಟೆ 
ಇಡಿ ನಗರವನ್ನು ನಡೆದುಕೊಂಡೇ ಸುತ್ತಿ ಮುಗಿಸಬಹುದು. ಸಾಧಾರಣವಾಗಿ ಯೂರೋಪಿನ ಯಾವುದೇ ಪ್ರವಾಸಿ ತಾಣಕ್ಕೆ ಹೋದರೆ ನಗರದ ಬಗ್ಗೆ ಮಾಹಿತಿ ಕೊಡಲು ಮಾಹಿತಿ ಸೇವಾ ಕೇಂದ್ರ ಇರುತ್ತದೆ. ಇಲ್ಲಿ ಹೋಟೆಲ್ನಿಂದ ಹಿಡಿದು ನಗರದ ಮ್ಯಾಪ್, ಪ್ರವಾಸಿ ತಾಣಗಳ ಪಟ್ಟಿ ಇತ್ಯಾದಿ ಸಿಗುತ್ತದೆ. ನಾವು ಇಂಟರ್ನೆಟ್ ನಿಂದ ಮಾಹಿತಿ ಕಲೆ ಹಾಕಿದ ಕಾರಣ ಮತ್ತೆ ಈ ಕೇಂದ್ರಕ್ಕಾಗಿ ಹುಡುಕುತ್ತಾ ಕೂರಲಿಲ್ಲ. ಸಣ್ಣ ಪುಟ್ಟ ಜಾಗಗಳನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಪ್ರವಾಸಿಗರನ್ನು ಸೆಳೆಯುವುದನ್ನು ನಾವು ಕಲಿಯಬೇಕು. 

ನಾವು ರೈಲಿಂದ ಇಳಿದ ಮೇಲೆ ಮನೆಯಿಂದ ತಂದಿದ್ದ ತಿಂಡಿ ತಿಂದು ನಿಧಾನವಾಗಿ ಊರಿನ ಕಡೆಗೆ ಹೊರಟೆವು. ನಗರದ ಹಳೆಯ ಪುರಭವನದ ಕತೆ ವಿಚಿತ್ರವಾಗಿದೆ . ಇಲ್ಲಿಯ ಬಿಷಪ್ ಪುರಭವನ ಕಟ್ಟಿಕೊಳ್ಳಲು ಜಾಗವನ್ನು ಕೊಡಲ್ಲಿಲ್ಲವಂತೆ. ಅದಕ್ಕೆ ಪುರಭವನವನ್ನು ನದಿಯ ಮದ್ಯದಲ್ಲಿ ಕಟ್ಟಲಾಯಿತು. ಕೆಳಗಿನ ಚಿತ್ರದಲ್ಲಿ ನೀರಿನ ಮದ್ಯೆ ಇರುವ ಪುರಭವನವನ್ನು ನೋಡಬಹುದು. 

ಹಳೆಯ ಪುರಭವನ
ಪುರಭವನದ ಗೋಡೆಯ ಮೇಲೆ ಚಿತ್ರಗಳು 
ಈಗ ಪುರಭವನ museum ಆಗಿ ಪರಿವರ್ತನೆಯಾಗಿದೆ. ಇದನ್ನು ನೋಡಿದ ನಂತರ ನಾವು ಸಂತ ಮೈಖೇಲ್ ನ ಚರ್ಚ್ ಕಡೆ ಹೊರಟೆವು. Bamberg ಗೆ ಏಳು ಮಲೆಗಳ ನಗರ ಎನ್ನುತ್ತಾರೆ. ಈ ಚರ್ಚ್ ಒಂದು ಗುಡ್ಡದ ಮೇಲೆ ಇದೆ. ಗುಡ್ಡದ ಮೇಲಿನಿಂದ ನಗರ ಸುಂದರವಾಗಿ ಕಾಣುತ್ತದೆ . 
ಗುಡ್ಡದ ಮೇಲಿನಿಂದ ಕಾಣುವ ಚಿಲುಮೆ ಹಾಗು ನಗರ 

ಗುಡ್ಡದ ಮೇಲೆ ಸಾಕಷ್ಟು ಸಮಯವನ್ನು ಕಳೆದ ಮೇಲೆ ವಾಪಸು ನಗರದ ಮದ್ಯ ಭಾಗಕ್ಕೆ ಬಂದೆವು. ಊಟಕ್ಕೆ ಪಿಜ್ಜಾ ಒಂದೇ ಗತಿ. Bamberg ನಲ್ಲಿ ಅಲ್ಲಿಯದ್ದೇ ಆದ smoked ಬಿಯರ್ ಸಿಗುತ್ತದೆ. ಇದನ್ನು ಕುಡಿಯಲು ಜನ ಸಾಲಾಗಿ ನಿಂತಿದ್ದರು. ಜರ್ಮನಿ ಬಿಯರ್  ತುಂಬಾ ಪ್ರಖ್ಯಾತ. ಇಲ್ಲಿ ಒಮ್ಮೊಮ್ಮೆ ನೀರಿಗಿಂತಲೂ ಬಿಯರ್ ಸೋವಿಯಾಗಿ ಸಿಗುತ್ತದೆ . 

ರೆಗ್ನಿತ್ಜ್ ನದಿಯ ನೋಟ 

ಊಟವಾದ ಮೇಲೆ ರೆಗ್ನಿತ್ಜ್ ನದಿಯಲ್ಲಿ ಒಂದು ವಿಹಾರ ಹೋಗಬೇಕೆಂದು ನಿರ್ಧರಿಸಿದೆವು. ಆದರೆ ಮಧ್ಯಾಹ್ನ ಮೂರು ಗಂಟೆಯವರೆಗೆ ಯಾವುದೇ ಬೋಟ್ ರೈಡ್ ಇರಲ್ಲಿಲ್ಲ. ಹಾಗಾಗಿ ಅಲ್ಲಿ, ಇಲ್ಲಿ ಸುತ್ತು ಹೊಡೆಯುತ್ತ ಸಮಯ ಕಳೆದೆವು. ಅಂತೂ ಮೂರು  ಗಂಟೆಗೆ ನಮ್ಮ ಬೋಟ್ ಹೊರಟಿತು. ಬೋಟ್ ರೈಡ್ ಅಂತಾ ವಿಶೇಷವಾಗೇನು ಇರಲ್ಲಿಲ್ಲ. ಮಧ್ಯದಲ್ಲಿ ಸಣ್ಣ ಡ್ಯಾಮ್ ಇದೆ . ಸಾಮಾನ್ಯವಾಗಿ ಇದು ನಗರವನ್ನು ಪ್ರವಾಹದಿಂದ ರಕ್ಷಿಸಲು ಮಾಡಿರುತ್ತಾರೆ. ನಮ್ಮ ಬೊಟ್ ಒಂದು ನಿರ್ಧಿಷ್ಟ ಜಾಗಕ್ಕೆ ಹೋಗಿ ನಿಲ್ಲುತ್ತದೆ . ಬೋಟ್ ನ ಎರಡು ಬದಿಯ ಗೇಟ್ ಹಾಕುತ್ತಾರೆ. ಮತ್ತೊಂದು ಬದಿಯ ಗೇಟ್ ತೆಗೆದಾಗ ನಾವು ಕೆಳಗಿನ ಮಟ್ಟಕ್ಕೆ ಬಂದಿರುತ್ತೇವೆ. ಬೋಟ್ ಆಗ ಮುಂದೆ ಸಾಗುತ್ತದೆ. ವಾಪಸು ಬರುವಾಗ ಮತ್ತೆ ಇದೆ ಮರುಕಳಿಸುತ್ತದೆ. ಆದರೆ ಈ ಬಾರಿ ಮೇಲಕ್ಕೆ ಹೋಗುತ್ತೇವೆ . 
ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ನೋಡಿ https://en.wikipedia.org/wiki/Lock_(water_transport)
ಸಣ್ಣ ವೆನಿಸ್ 
Bamberg ನಲ್ಲಿ ಸಣ್ಣ ವೆನಿಸ್ ಅನ್ನುವ ಸ್ಥಳ ಇದೆ. ಇಲ್ಲಿ ಸ್ಥಳೀಯ ಮೀನುಗಾರರು ಇರುತ್ತಾರೆ. ವೆನಿಸ್ ಅಷ್ಟು ಸುಂದರ ವಾಗೇನು  ಇಲ್ಲ .
Bamberg ಒಂದು ವಾರಾಂತ್ಯ ಕಳೆಯಲು ಹೇಳಿ ಮಾಡಿಸಿದ ಸ್ಥಳ.



No comments:

Post a Comment