Friday, May 15, 2015

ಬವೇರಿಯಾದ ರಾಜಧಾನಿ ಮ್ಯುನಿಕ್

ಒಲಂಪಿಯಾ ಪಾರ್ಕ್ 

ಅತಿ ಸುಂದರ Koenigsee

ಒಬೆರ್ ಸೀ ಫೋಟೋ. ಹಿನ್ನೆಲೆಯಲ್ಲಿ ಜಲಪಾತ ಕಾಣಿಸುತ್ತಿದೆ


ಜರ್ಮನಿಯು ಬವೇರಿಯಾ ರಾಜ್ಯದಲ್ಲಿರುವ ಬೆರ್ಚ್ ಗಾರ್ಟೆನ್ ಜಿಲ್ಲೆಯಲ್ಲಿ ಸುಂದರವಾದ ಕೋನಿಗ್ ಸೀ ಇದೆ. ಸೀ ಅಂದರೆ ಜರ್ಮನ್ ಭಾಷೆಯಲ್ಲಿ ಸರೋವರ. ಇದು ಆಸ್ಟ್ರಿಯ ದೇಶಕ್ಕೂ, ಜರ್ಮನಿಗೂ   ಗಡಿ ಭಾಗದಲ್ಲಿದೆ. ಸುತ್ತಲೂ ಅಲ್ಫೈನ್ ಪರ್ವತಗಳಿಂದ ಆವೃತ್ತಗೊಂಡ ಈ ಸರೋವರ ಸುಮಾರು ಎಂಟು ಕಿಲೋಮೀಟರುಗಳಷ್ಟು ಉದ್ದ ಇದೆ. ಅಗಲ ಹೆಚ್ಚಿಲ್ಲ . ಬರಿ ಒಂದು ಕಿಲೋಮೀಟರು ಇರಬಹುದು. ಜರ್ಮನಿಯಲ್ಲೇ ಎರಡನೇ ಆಳದ ಸರೋವರ ಎಂದು ಇದು ಹೆಸರು ಪಡೆದಿದೆ.

ಮೇ ತಿಂಗಳಲ್ಲಿ ಒಂದು ದಿನ ನಾನು, ನನ್ನ ಎರಡು ವರ್ಷದ ಮಗಳು ಶಾಲ್ಮಲಿ, ನನ್ನ ಹೆಂಡತಿ ಬೆಳಗ್ಗೆ ಮ್ಯುನಿಕ್ ನಿಂದ ಕೋನಿಗ್ ಸೀಗೆ ಹೊರಟೆವು.  ಮ್ಯುನಿಕ್ ನ ನಿಲ್ದಾಣದಲ್ಲಿ ರುಚಿಯಾದ ಕ್ರೋಯಿಸಾಂಟ್, ಹಣ್ಣುಗಳನ್ನು ತಿಂದು ತಿಂಡಿ ಮುಗಿಸಿದೆವು. ಮ್ಯುನಿಕ್ ನಿಂದ ಆಸ್ಟ್ರಿಯಾದ ಸಾಲ್ಸ್ ಬರ್ಗ್ ನಗರಕ್ಕೆ ಬೇಕಾದಷ್ಟು ರೈಲಿದೆ. ಈ ರೈಲಿನಲ್ಲಿ ಹೋದರೆ ಬೆರ್ಚ್ ಗಾರ್ಟನ್ ತಲುಪಬಹುದು. ಮ್ಯುನಿಕ್ ನಿಂದ  ಸುಮಾರು ಒಂದೂವರೆ ತಾಸು ಪ್ರಯಾಣ.  ಬೆರ್ಚ್ ಗಾರ್ಟನ್ ರೈಲ್ವೆ ನಿಲ್ದಾಣದಿಂದ ಕೋನಿಗ್ ಸೀಗೆ ಬಸ್ ನಲ್ಲಿ ಹದಿನೈದು ನಿಮಿಷದ ಪ್ರಯಾಣ. ನಾವು ಹೋದ ದಿನ ಭಾನುವಾರ ಆದ್ದರಿಂದ ಬಸ್ ಪ್ರತೀ ನಲವತ್ತು ನಿಮಿಷಗಳಿಗೆ ಒಮ್ಮೆ ಇತ್ತು . ನಾವು ಬೆರ್ಚ್ ಗಾರ್ಟನ್ ತಲುಪುವಷ್ಟರಲ್ಲಿ ಒಂದು ಬಸ್ ಹೋಗಿಯಾಗಿತ್ತು. ಇನ್ನು ನಲವತ್ತು ನಿಮಿಷ ಕಾಯಬೇಕಿತ್ತು. ಹೆಚ್ಚು ಕಡಿಮೆ ಮಧ್ಯಾಹ್ನ ವಾಗಿದ್ದರಿಂದ ನಾವು ಊಟದ ಶಾಸ್ತ್ರ ಮುಗಿಸಿದೆವು. ಮಗಳಿಗೂ ಊಟ ಮಾಡಿಸಿದೆವು. ಬಸ್ ನಿಲ್ದಾಣದ ವೇಳಾ ಪಟ್ಟಿಯಲ್ಲಿ ತಿಳಿಸಿದ ಹಾಗೆ ಒಂದು ನಿಮಿಷವೂ ತಡವಾಗದೆ ಬಸ್ ಬಂತು. ಗಡಿಬಿಡಿಯಲ್ಲಿದ್ದರೆ ಇಲ್ಲಿಂದ ಟ್ಯಾಕ್ಸಿ ಸಹಿತ ಲಭ್ಯವಿದೆ. ಕೋನಿಗ್ ಸೀ ತಲುಪಲು ಇನ್ನೂ ಒಂದು ನಿಲ್ದಾಣ ಇರುವ ಹಾಗೆ ನಾವು ತಪ್ಪಿ ಇಳಿದುಬಿಟ್ಟೆವು. ನಮ್ಮ ಪುಣ್ಯಕ್ಕೆ ಸರೋವರಕ್ಕೆ ಹೆಚ್ಚು ದೂರವಿಲ್ಲದೆ ನಾವು ನಡೆದುಕೊಂಡು ತಲುಪಿದೆವು. ನಡೆದುಕೊಂಡು ಹೊದದ್ದು ಒಂದು ತರದಲ್ಲಿ ಒಳ್ಳೆಯದೇ ಆಯಿತು. ಸುತ್ತಲಿನ ಪ್ರಕೃತಿ ಸೌಂದರ್ಯ ಸವಿಯುವುದಕ್ಕೆ ಅನುಕೂಲವಾಯಿತು. ಸರೋವರ ತಲುಪಿದ ಕೂಡಲೇ ಟಿಕೆಟ್ ಕೊಡುವ ಸ್ಥಳಕ್ಕೆ ಹೋಗಿ ಟಿಕೆಟ್ ತೆಗೆದುಕೊಂಡೆವು.

 ಕೋನಿಗ್ ಸೀ ಜರ್ಮನಿಯಲ್ಲೇ ಸ್ವಚ್ಚವಾದ ಸರೋವರ ಎಂದು ಹೆಸರು ಪಡೆದಿದೆ. ಸ್ವಚ್ಚತೆಯನ್ನು ಕಾಪಾಡಲು ಇಲ್ಲಿ ಬರಿ ವಿದ್ಯುಚ್ಛಕ್ತಿ ಉಪಯೋಗಿಸಿಕೊಂಡು ಓಡುವ ದೋಣಿ ಅಥವಾ ಹುಟ್ಟು ಹಾಕಿಕೊಂಡು ಹೋಗಬಲ್ಲ ದೋಣಿಗೆ ಮಾತ್ರ ಅನುಮತಿಯಿದೆ.
ನಾವು ಟಿಕೆಟ್ ಕೊಂಡು ಈ ರೀತಿಯ ಒಂದು ವಿದ್ಯುಚ್ಚಾಲಿತ ದೋಣಿಯಲ್ಲಿ ಕುಳಿತೆವು. ಸ್ವಲ್ಪ ಹೊತ್ತಿನಲ್ಲೇ ಮಳೆಯೂ ಹನಿ ಹಾಕಲು ಶುರುವಾಯಿತು. ದೋಣಿ ಸುತ್ತಲೂ ಗಾಜಿನಿಂದ ಆವೃತ್ತವಾಗಿತ್ತು. ಇದರಿಂದ ಸರೋವರದ ಸೌಂದರ್ಯ ಸವಿಯಲು ಅನುಕೂಲವಾಯಿತು. ದೋಣಿ ಹೊರಟ ಮೇಲೆ ಜುರಾಸಿಕ್ ಕಾಲದಿಂದ ಖನಿಜಗಳೆಲ್ಲ ಕರಗಿ ಗಾಢ ಹಸಿರು ಬಣ್ಣದ ಸರೋವರ ಸುತ್ತಲಿನ ಪರ್ವತಗಳ ಸಾಲು ಇವನ್ನು ನೋಡುತ್ತಾ ಸಮಯ ಹೋಗಿದ್ದೇ ತಿಳಿಯಲಿಲ್ಲ. ಮೇ ಕೊನೆಗೆ ವಸಂತ ಕಾಲ ಮುಗಿಯುತ್ತಾ ಬಂದಿತ್ತು. ಪರ್ವತಗಳ ಮೇಲಿನ ಹಿಮವೆಲ್ಲಾ ಕರಗಿ ಹಸಿರು ಹೊದ್ದುಕೊಂಡು ಕೂತಿತ್ತು. ಮಳೆಯೂ ಬರುತ್ತಿದ್ದರಿಂದ ಮೋಡಗಳೆಲ್ಲ ಪರ್ವತವನ್ನು ಸುತ್ತುವರೆದು ಅದ್ಬುತ ಲೋಕವನ್ನು ಸೃಷ್ಟಿಸಿದ್ದವು. ದೋಣಿಯಲ್ಲಿ ಚಾಲಕ ಹಾಗು ಸಹಾಯಕನೊಬ್ಬ ಇದ್ದು, ಸ್ಥಳದ ಬಗ್ಗೆ ಮಾಹಿತಿ ಕೊಡುತ್ತಿದ್ದರು. ಮಾಹಿತಿ ಜರ್ಮನ್ ಭಾಷೆ ಹಾಗು ಆಂಗ್ಲ ಭಾಷೆಯಲ್ಲಿ ಇರುತ್ತಿತ್ತು. ನಮ್ಮ ದೋಣಿಯಲ್ಲಿ ಒಂದು ಚೀನಾ ದೇಶದ ಪ್ರವಾಸಿಗರ ಗುಂಪು ಇತ್ತು. ಗುಂಪಿನ ಒಬ್ಬ ಸದಸ್ಯ ಮಾಹಿತಿಯನ್ನು ಚೀನಾ ಭಾಷೆಗೆ ತರ್ಜುಮೆ ಮಾಡಿ ಗುಂಪಿನ ಇತರರಿಗೆ ತಿಳಿಸುತ್ತಿದ್ದ. ಪ್ರಯಾಣದ ಮಧ್ಯದಲ್ಲೇ ಒಂದು ಕಡೆ ದೋಣಿಯನ್ನು ನಿಲ್ಲಿಸಿದರು  ದೋಣಿಯಲ್ಲಿದ್ದ ಸಹಾಯಕ ಜರ್ಮನಿಯ ಸ್ಯಾಕ್ಸೋಫೋನ್ ಮಾದರಿಯ ವಾಲಗ  ತೆಗೆದ. ಎಲ್ಲರಿಗೂ  ನಿಶಬ್ಧವಾಗಿರಲು ತಿಳಿಸಿ, ವಾಲಗ ಊದಿದ. ಒಂದು ಸೆಕೆಂಡ್ ನಲ್ಲೆ ನಮಗೆ ಅದರ ಪ್ರತಿಧ್ವನಿ ಕೇಳಿಸಿತು. ಮತ್ತೆ ಒಂದು ಸೆಕೆಂಡ್ ಬಳಿಕ ವಾಲಗ ಊದಿದ. ಹೀಗೆ ಸುಮಾರು ಹೊತ್ತು ಧ್ವನಿ, ಪ್ರತಿಧ್ವನಿಯನ್ನು ಕೇಳಿ ಖುಷಿ ಪಟ್ಟೆವು. ಕೊನೆಯಲ್ಲಿ ಈ ಅನುಭವವನ್ನು ನೀಡಿದ ವಾಲಾಗದವನಿಗೆ ಪ್ರಯಾಣಿಕರೆಲ್ಲ ಟಿಪ್ಸ್ ಕೊಟ್ಟೆವು. ಇದನ್ನು ಖುಷಿಯಿಂದ ಸ್ವೀಕರಿಸಿ ಮುಂದಿನ ಪ್ರಯಾಣದ ವಿವರಣೆಯನ್ನು ನೀಡತೊಡಗಿದ.

ಹೀಗೆ ಹೊರಟ ದೋಣಿಯು ಸಂತ ಬರತೊಲೊಮಾ ಎನ್ನುವ ಚರ್ಚ್ ಬಳಿ ನಿಂತಿತು. ನಾವು ವಾಪಸು ಬರುತ್ತಾ ಇದನ್ನು ಸಂದರ್ಶಿಸಲು ನಿರ್ಧರಿಸಿದ್ದರಿಂದ ಇಲ್ಲಿ ಇಳಿಯಲ್ಲಿಲ್ಲ. ಚೀನಾ ದಿಂದ ಬಂದ ಗುಂಪು ಇಲ್ಲಿ ಇಳಿಯಿತು. ನಾವು ಕೊನೆಯ ನಿಲ್ದಾಣ "ಸಲಾಟ್" ಗೆ ಹೊರಟೆವು. ಕೋನಿಗ್ ಸೀ ಪಕ್ಕದಲ್ಲೇ ಒಬೆರ್ ಸೀ ಅನ್ನುವ ಇನ್ನೊಂದು ಸರೋವರ ಇದೆ. ಇದು ಸಣ್ಣ ಸರೋವರ. ಇದರ ಒಂದು ಪಾರ್ಶ್ವದಲ್ಲಿ ಪರ್ವತದಿಂದ ರೋತ್ ಬಾಕ್ ಎನ್ನುವ ಜಲಪಾತ ಇದೆ. ಸಲಾಟ್ ನಿಂದ ಒಬೆರ್ ಸೀಗೆ ನಡೆದುಕೊಂಡೇ ತಲುಪಬಹುದು. ಸಂತ ಬರತೊಲೊಮಾ ಹಾಗು ಒಬೆರ್ ಸೀಗೆ ತಲುಪಲು ಚಾರಣ ಮಾಡಿ ಅಥವಾ ದೋಣಿಯ ಮೂಲಕವೇ ತಲುಪಬಹುದು. ಬೇರೆ ವಾಹನ ಬರಲು ಅವಕಾಶವಿಲ್ಲ. ನಾವು ಯಾವುದೇ ಗಡಿಬಿಡಿಯಿಲ್ಲದೆ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಒಬೆರ್ ಸೀ ತಲುಪಿದೆವು. ಸ್ವಲ್ಪ ಹೊತ್ತು ಅಲ್ಲಿ  ಕಳೆದು ಸಾಲಾಟ್ ನಿಲ್ದಾಣದ ಕಡೆ ಹೊರಟೆವು. ಐದು ನಿಮಿಷದಲ್ಲೇ ವಾಪಾಸ್ ಹೊರಡಲು  ದೋಣಿ ಬಂದಿತು. ನಾವು ಈ ಭಾರಿ ಸಂತ ಬರತೊಲೊಮಾ ಚರ್ಚ್ ಹತ್ತಿರ ಇಳಿದುಕೊಂಡೆವು. ಬರೋಕ್ ಶೈಲಿಯಲ್ಲಿ ಕಟ್ಟಿದ ಚರ್ಚ್ ಆಕರ್ಷಕವಾಗಿತ್ತು. ಒಂದಿಷ್ಟು ಫೋಟೋ ತೆಗೆದಾದ ಮೇಲೆ ಅಲ್ಲಿಂದ ಹೊರಟು ಕೋನಿಗ್ ಸೀ ಮೊದಲ ನಿಲ್ದಾಣದ ಕಡೆ ಹೊರಟೆವು. ಮದ್ಯೆ ಚಾರಣ ಹೋಗುವ ಜನ ಇಳಿದುಕೊಳ್ಳಲು ಒಂದು ನಿಲ್ದಾಣ ಇದೆ. ಇಲ್ಲಿ ಕೋರಿಕೆಯ ಮೇಲೆ ದೋಣಿ ನಿಲ್ಲಿಸುತ್ತಾರೆ. ಅಲ್ಲಿ ಯಾರು ಇಳಿಯುವವರೂ ಹತ್ತುವವರೂ ಯಾರು ಇಲ್ಲದ ಕಾರಣ ಅಲ್ಲಿ ನಿಲ್ಲಿಸಲಿಲ್ಲ. ಸಂಜೆಯಾದ್ದರಿಂದ ಆಗಲೇ ಚಳಿ ಶುರುವಾಗತೊಡಗಿತು. ನಾವು ಪ್ರವಾಸದ ಸುಂದರ ನೆನಪಿನೊಂದಿಗೆ ಬೆರ್ಚ್ ಗಾರ್ಟನ್ ನಿಂದ ಮ್ಯುನಿಕ್ ಗೆ ರೈಲು ಹಿಡಿದೆವು.